*ಕೆಕೆಆರ್‌ಡಿಬಿಯಲ್ಲಿ ರಾಜ್ಯೋತ್ಸವ ದಿನಾಚರಣೆ:*
*ಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಮಂಡಳಿ ಬದ್ಧ*
*-ಡಾ. ಅಜಯ ಸಿಂಗ್*
ಕಲಬುರಗಿ,ನ.1(ಕ.ವಾ) ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ನಮ್ಮ ಸರಕಾರ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ಗಳನ್ನು ನೀಡಿದೆ. ಇದು ಈ ಭಾಗದ ಅಭಿವೃದ್ಧಿಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಜೇವರ್ಗಿ ಶಾಸಕ ಡಾ. ಅಜಯ ಸಿಂಗ್ ಹೇಳಿದರು.
ಮಂಡಳಿಯ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ ಮೂಲಕ ಪ್ರದೇಶದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಹಿಂದುಳಿದ, ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ ಹಾಸ್ಟೆಲ್ ನಿರ್ಮಿಸಲು ಮೊದಲ ಬಾರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಸಾಮಾಜಿಕ ನ್ಯಾಯದ ಮೇಲೆ ಕೆಕೆಆರ್‌ಡಿಬಿ ಕೆಲಸ ಮಾಡುತ್ತಿದೆ ಎಂದರು.
ಕಲ್ಯಾಣ ಭಾಗದಲ್ಲಿ ಉದ್ಯೋಗ, ಕೃಷಿ, ಕೈಗಾರಿಕೆ, ಅಂತರ್ಜಲ ಅಭಿವೃದ್ಧಿಗೆ ಮೊದಲ ಬಾರಿಗೆ ಅನುದಾನ ನೀಡಲಾಗಿದೆ. ಮಂಡಳಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರದಿಂದ ಈಗ ಆರ್ಥಿಕ ಸಾಧನೆ ಹೆಚ್ಚಾಗಿದೆ. ಗುರಿ ಮೀರಿ ಆರ್ಥಿಕ ಮತ್ತು ಭೌತಿಕ ಸಾಧನೆ ಮಾಡಲು ಎಲ್ಲ ಸಿಬ್ಬಂದಿ ಸಹಕಾರ ಅಗತ್ಯ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗವು ಬಸವಾದಿ ಶರಣರು ನಡೆದಾಡಿದ ಪುಣ್ಯ ಭೂಮಿ. ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಮೊದಲ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟ ನೆಲ ಇದಾಗಿದೆ. ಕನ್ನಡದ ಮೊದಲ ಉಪಲಬ್ದ ಗ್ರಂಥ ಕವಿರಾಜ ಮಾರ್ಗ ನೀಡಿದ ಜಿಲ್ಲೆ ಕಲಬುರಗಿ ಎಂಬುದು ನಮಗೆ ಹೆಮ್ಮೆಯ ವಿಷಯ. ಬಸವಾದಿ ಶರಣರ ತತ್ವಗಳ ಅಡಿಯಲ್ಲಿ ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಯುತ್ತಿದೆ ಎಂದು ನುಡಿದರು.
*ಅಭಿವೃದ್ಧಿಗೆ ಕೈಜೋಡಿಸಿ:*
ಕನ್ನಡಕ್ಕೆ ಕಲ್ಯಾಣ ಕರ್ನಾಟಕದ ಕೊಡುಗೆ ಹಿರಿದಾಗಿದೆ. ವಚನ ಸಾಹಿತ್ಯದ ತವರೂರು ನಮ್ಮ ಕಲ್ಯಾಣ. ಈ ಭಾಗದಲ್ಲಿರುವ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳು ನಮ್ಮ ಹಿರಿಮೆಯನ್ನು ಹೆಚ್ಚಿಸಿವೆ. ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಡಾ.ಅಜಯಸಿಂಗ್ ತಿಳಿಸಿದರು.
ಮಂಡಳಿ ಉಪ ಕಾರ್ಯದರ್ಶಿ ಮಂಜುನಾಥ ಸ್ವಾಮಿ, ಅಪರ ನಿರ್ದೇಶಕಿ ಪ್ರವೀಣ ಪ್ರಿಯಾ ಡೇವಿಡ್, ಅಧೀನ ಕಾರ್ಯದರ್ಶಿ ಪ್ರಕಾಶ ಕುದರಿ ಮತ್ತು ಸಿಬ್ಬಂದಿ ಇದ್ದರು.
Post a Comment