*ಉಪ ಲೋಕಾಯುಕ್ತರ ಪ್ರವಾಸ ಹಿನ್ನೆಲೆ:*
*ಕಚೇರಿಯಲ್ಲಿ ಬಾಕಿ ಕಡತ ವಿಲೇವಾರಿಗೆ ಸೂಚನೆ*
*-ಬಿ.ಫೌಜಿಯಾ ತರನ್ನುಮ್*
ಕಲಬುರಗಿ,ನ.8(ಕ.ವಾ) ರಾಜ್ಯದ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಇದೇ ನವೆಂಬರ್ 15 ರಿಂದ 17ರ ವರೆಗೆ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಸಾರ್ವಜನಿಕರ ಅಹವಾಲು ಆಲಿಸುವುದರಿಂದ ಕೂಡಲೆ ಇಲಾಖಾವಾರು ಬಾಕಿ ಕಡತವನ್ನು ನವೆಂಬರ್ 14ರೊಳಗೆ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನ.15 ರಂದು ಸಾರ್ವಜನಿಕರ ಅಹವಾಲು ಆಲಿಕೆ ಮತ್ತು ನ.16 ರಂದು ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸುವರು. ಇನ್ನು ನ.17 ರಂದು ವಿವಿಧ ಸರ್ಕಾರಿ ಕಚೇರಿ, ಅಂಗನವಾಡಿ, ಶಾಲೆ, ಆಸ್ಪತ್ರೆಗಳಿಗೆ ಹಠಾತ್ ಭೇಟಿ ನೀಡುವರು ಎಂದರು.
ನವೆಂಬರ್ 15 ರಂದು ನಡೆಯುವ ಸಾರ್ವಜನಿಕ ಅಹವಾಲು ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸುವುದರಿಂದ ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರ ಆವರಣ ಸುತ್ತ ಸ್ವಚ್ಛತೆ ಕಾಪಾಡಬೇಕು. ಸಾರ್ವಜನಿಕರ ಅಹವಾಲು ಸಲ್ಲಿಸಲು ಸಾಕಷ್ಟು ಪ್ರಮಾಣದಲ್ಲಿ ಕೌಂಟರ್ ಸ್ಥಾಪಿಸಬೇಕು. ಕುಟಿಯವ ನೀರಿನ ವ್ಯವಸ್ಥೆ ಮಾಡಬೇಕು. ಸಂಚಾರ ನಿರ್ವಹಣೆ ಜೊತೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಬೇಕು ಎಂದರು.
ಮೂರು ದಿನಗಳ ಉಪ ಲೋಕಾಯಕ್ತರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಈಗಾಗಲೆ 7 ಸಮಿತಿ ರಚಿಸಿದ್ದು, ಆಯಾ ಸಮಿತಿಗೆ ನೀಡಲಾದ ಜವಾಬ್ದಾರಿಯನ್ನು ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
*ಕೇಂದ್ರ ಸ್ಥಾನದಲ್ಲಿರುವಂತೆ ಸೂಚನೆ:*
ನವೆಂಬರ್ 15 ರಿಂದ 17ರ ವರೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರಬೇಕು. ಸಾರ್ವಜನಿಕ ಅಹವಾಲು ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಎಲ್ಲಾ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ., ಪಿ.ಡಿ.ಓ, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿರಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕಂದಾಯ ಉಪ ಅಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಸೇರಿ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
Post a Comment