*ಜೆಸ್ಕಾಂನಲ್ಲಿ ರಾಜ್ಯೋತ್ಸವ ಆಚರಣೆ:*
*ದೈನಂದಿನ ಆಡಳಿತದಲ್ಲಿ ಕನ್ನಡವೇ ಬಳಸಿ*
*-ರವೀಂದ್ರ ಕರಲಿಂಗಣ್ಣನವರ್*
ಕಲಬುರಗಿ,ನ.1(ಕ.ವಾ) ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎನ್ನುವ ಚನ್ನವೀರ ಕಣವಿಯವರ ಕವಿ ವಾಕ್ಯದಂತೆ ಅಧಿಕಾರಿ-ನೌಕರರು ತಮ್ಮ ದೈನಂದಿನ ಆಡಳಿತ ವ್ಯವಹಾರದಲ್ಲಿ ಕನ್ನಡವನ್ನೇ ಬಳಸಬೇಕೆಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣನವರ್ ಅವರು ಕರೆ ನೀಡಿದರು.
ಶುಕ್ರವಾರ ಕಲಬುರಗಿ ನಗರದ ಜೆಸ್ಕಾಂ ನಿಗಮ ಕಚೇರಿ ಆವರಣದಲ್ಲಿ ಕವಿಪ್ರನಿನಿ ಮತ್ತು ಗುವಿಸಕಂನಿ ಕನ್ನಡ ಸಂಘದಿಂದ ಆಯೋಜಿಸಿದ 69ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮೌರ್ಯರು, ಶಾತವಾಹನರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಪುಲಿಕೇಶಿ, ವಿಜಯನಗರದ ಅರಸರು, ಮೈಸೂರು ಅರಸರು ಆಳಿರುವ ಕರುನಾಡು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ರಾಜ ಮಹಾರಾಜರ ಶೌರ್ಯ, ಸಾಹಸದಿಂದ ನಮ್ಮ ರಾಜ್ಯ ನರ್ಮದಾ ಮತ್ತು ಗಂಗಾನದಿ ತೀರದ ವರೆಗೆ ವಿಸ್ತಾರವಾಗಿತ್ತು ಎಂಬುದು ಇತಿಹಾಸದಲ್ಲಿ ಕಾಣುತ್ತೇವೆ. ರಾಜ್ಯರ ಆಳ್ವಿಕೆಯಲ್ಲಿಯೂ ಸಾಹಿತ್ಯ, ಕಲೆ, ಶಿಲ್ಪಕಲೆ, ಸಂಗೀತ, ನೃತ್ಯ, ವ್ಯಾಪಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ವಿಜಯನಗರದ ಅರಸರ ಕಾಲದಲ್ಲಿ ಮುತ್ತು, ರತ್ನ, ವಜ್ರ ವೈಢರ‍್ಯಗಳ ವಾಪಾರ ಬೀದಿಗಳಲ್ಲಿ ನಡೆಯುತ್ತಿತ್ತು ಎಂದು ಸಂಪತ್ಭರಿತ ನಾಡಿನ ಇತಿಹಾಸವನ್ನು ಮೆಲುಕು ಹಾಕಿದರು.
12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ಬುನಾದಿ ಹಾಕಿದ ವಿಶ್ವಗುರು ಬಸವಣ್ಣನ ಕರ್ಮ ಭೂಮಿ ನಾಡು ನಮ್ಮದೆಂದು ತಿಳಿಸಿದ ಅವರು, ಇಂದು ಭಾರತ ಶಕ್ತಿಶಾಲಿಯಾಗಿ ವಿಶ್ವದಲ್ಲಿ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದರ ಹಿಂದೆ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಶೈಕ್ಷಣಿಕ, ಸಂಶೋಧನೆ, ಆರೋಗ್ಯ, ನವೋದ್ಯಮ, ಕೌಶಲ್ಯ, ರಕ್ಷಣಾ ಕ್ಷೇತ್ರದಲ್ಲಿನ ರಾಜ್ಯದ ಕೊಡುಗೆ ಅಪಾರವಾಗಿದೆ ಎಂದು ರವೀಂದ್ರ ಕರಲಿಂಗಣ್ಣನವರ್ ಹೇಳಿದರು.
ಸಮಾರಂಭದಲ್ಲಿ ನಿಗಮದ ಪ್ರಧಾನ ವ್ಯವಸ್ಥಾಪಕ ಆಶಪ್ಪ, ಪ್ರಸರಣ ವಲಯದ ಮುಖ್ಯ ಇಂಜಿನಿಯರ್ ಗಿರಿಧರ ಕುಲಕರ್ಣಿ, ಕಂಪನಿ ಕಾರ್ಯದರ್ಶಿ ಕಿರಣ ಪೋಲೀಸ್ ಪಾಟೀಲ್, ಜಾಗೃತ ದಳದ ಪ್ರಭಾರಿ ಎಸ್.ಪಿ. ಸುಬೇದಾರ, ಕನ್ನಡ ಸಂಘದ ಅಧ್ಯಕ್ಷ ಮಹ್ಮದ್ ಮಿನ್ಹಾಜುದ್ದೀನ್, ಕವಿಪ್ರನಿನಿ ನೌಕರರ ಸಂಘದ ಉಪಾಧ್ಯಕ್ಷ ಬಾಬು ಕೋರೆ, ಕವಿಮಂ ಇಂಜಿನಿಯರುಗಳ ಸಂಘದ ವಿಶ್ವನಾಥರೆಡ್ಡಿ, ಪಜಾ-ಪಪಂ ಕಲ್ಯಾಣ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ಆರ್.ಬುದ್ಧ, ಡಿ.ಇಂ. ಸಂಘದ ಸಂಘಟನಾ ಕಾರ್ಯದರ್ಶಿ ವೆಂಕಟಜೀವನ ಅವರು ಉಪಸ್ಥಿತರಿದ್ದರು. ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಶೇರಿಕಾರ್ ನಿರೂಪಿಸಿದರು.
ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಸಮಂಜರಿ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ನೌಕರರ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
Post a Comment