Clickable Image

Friday, October 17, 2025

ಮುತ್ತಗಾ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನ

 ಮುತ್ತಗಾ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನ



ಕಲಬುರಗಿ: ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿಯನ್ನು ಭಗ್ನಗೊಳಿಸಿ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಶಹಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.



ಶುಕ್ರವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜೀವಣಗಿ ಗ್ರಾಮದ ಮಲ್ಲಿಕಾರ್ಜುನ್ ವಿಶ್ವಾರಾಧ್ಯ ಪಾಟೀಲ್, ಮುತ್ತಗಾ ಗ್ರಾಮದ ಸಾಬಣ್ಣ ಮಲ್ಲಪ್ಪ ಪಟ್ಟೇದಾ ಹಾಗೂ ಶಿವರಾಜ್ ಶಂಕರ ನಾಟೀಕಾರರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.


ಅಕ್ಟೋಬರ್ 10ರಂದು ಬೆಳಗಿನ ಜಾವ ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ವಿರೂಪಗೊಳಿಸಿ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಪಿಐ ನಟರಾಜ್ ಲಾಡೆ, ಸಿಪಿಐ ಚಂದ್ರಶೇಖರ್ ತಿಗಡಿ ಹಾಗೂ ಜಗದೇವಪ್ಪ ಪಾಳಾ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.


ತನಿಖೆಯ ಭಾಗವಾಗಿ ಶ್ವಾನ ದಳದ ಸಹಾಯದೊಂದಿಗೆ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಇತರ ಸಹಆರೋಪಿಗಳ ಪತ್ತೆ ಕಾರ್ಯವೂ ನಡೆಯುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.


ಈ ಘಟನೆಗೆ ಪ್ರತಿಕ್ರಿಯೆವಾಗಿ ಕೋಲಿ ಸಮಾಜದ ಸದಸ್ಯರು ಹಾಗೂ ವಿವಿಧ ಸಂಘಟನೆಗಳು ಜಿಲ್ಲಾದ್ಯಂತ ಹೋರಾಟ ಮತ್ತು ಪ್ರತಿಭಟನೆಗಳನ್ನು ನಡೆಸಿದ್ದು, ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಶೀಘ್ರ ಬಂಧನದಿಂದಾಗಿ ಪರಿಸ್ಥಿತಿ ಶಮನಗೊಂಡಿದೆ.

Post a Comment

Whatsapp Button works on Mobile Device only