Clickable Image

Thursday, October 31, 2024

ಚಿಂಚೋಳಿ ವನ್ಯಜೀವಿ ಅಭಯಾರಣ್ಯ,ಚಂದ್ರಂಪಳ್ಳಿ ಪ್ರಕೃತಿ ಚಾರಣ ಇನ್ನು ಮುಕ್ತ:* *ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ವ ಪ್ರಯತ್ನ* *-ಪ್ರಿಯಾಂಕ್ ಖರ್ಗೆ*

 *ಚಿಂಚೋಳಿ ವನ್ಯಜೀವಿ ಅಭಯಾರಣ್ಯ,ಚಂದ್ರಂಪಳ್ಳಿ ಪ್ರಕೃತಿ ಚಾರಣ ಇನ್ನು ಮುಕ್ತ:*


*ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ವ ಪ್ರಯತ್ನ*


*-ಪ್ರಿಯಾಂಕ್ ಖರ್ಗೆ*





ಕಲಬುರಗಿ,ಅ.31(ಕ.ವಾ) ಜಿಲ್ಲೆಯ ಧಾರ್ಮಿಕ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಮೂಲಕಸೌಕರ್ಯಗಳನ್ನು ಬಲಪಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.


ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ಅಭಯಾರಣ್ಯ ಮತ್ತು ಚಂದ್ರಂಪಳ್ಳಿ ಪ್ರಕೃತಿ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿಂಚೋಳಿ ವನ್ಯಜೀವಿ ಪ್ರದೇಶ ಪರಿಸರ ಪ್ರಿಯರ ನೆಚ್ಚಿನ ತಾಣವಾಗಿದೆ. ಚಂದ್ರಂಪಳ್ಳಿ ಜಲಾಶಯ, ಕಾಡು ಸುತ್ತ ಹಸಿರು ರಮಣೀಯ ದೃಶ್ಯ ಕಾಣಬಹುದಾಗಿದೆ. ಈಗಾಗಲೆ ಅರಣ್ಯ ಸಿಬ್ಬಂದಿ, ಚಾರಣ ಪ್ರಿಯರ ಗುಂಪುಗಳ ಮುಖೇನ ಪ್ರಾಯೋಗಿಕವಾಗಿ ಚಾರಣ ಮಾಡಲಾಗಿದೆ. ಇಂತಹ ಪ್ರಕೃತಿ ಸೌಂದರ್ಯವನ್ನು ಚಾರಣದ ಮೂಲಕ ಕಣ್ತುಂಬಿಕೊಳ್ಳಲು ಇಂದಿಲ್ಲಿ ಚಾರಣಕ್ಕೆ ಚಾಲನೆ ನೀಡಲಾಗಿದೆ ಎಂದರು.


ಕೆಲವೇ ದಿನದಲ್ಲಿ aranyavihaara.Karnataka.gov.in ಸಾರ್ವಜನಿಕರು ಮತ್ತು ಚಾರಣ ಪ್ರಿಯರು ಬುಕ್ಕಿಂಗ್ ಮಾಡಿಕೊಂಡು ಚಾರಣ ಮಾಡಬಹುದಾಗಿದೆ. ಚಂದ್ರಂಪಳ್ಳಿ ನಿಸರ್ಗ ಧಾಮ-ಗೊಟ್ಟಂಗೊಟ್ಟ ಕ್ಯಾಂಪ್ ವರೆಗೆ 9 ಕಿ.ಮೀ. ಚಾರಣವನ್ನು ಮೂರುವರೆ ಗಂಟೆ ಮತ್ತು ಚಂದ್ರಂಪಳ್ಳಿ ನಿಸರ್ಗ ಶಿಬಿರ-ಚಂದ್ರಂಪಳ್ಳಿ ಅರಣ್ಯ ಪ್ರದೇಶದ ಗಡಿಯವರೆಗೆ 4 ಕಿ.ಮೀ. ಚಾರಣವನ್ನು ಒಂದೂವರೆ ಗಂಟೆಯಲ್ಲಿ ಮಾಡಬಹುದಾಗಿದೆ. ಬೆಳಿಗ್ಗೆ 6 ರಿಂದ 2 ಗಂಟೆ ವರೆಗೆ ಮಾತ್ರ ಚಾರಣಕ್ಕೆ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತದೆ. ಕಾಡಿನಲ್ಲಿ ಚಾರಣ ಪ್ರಿಯರಿಗೆ ಅಗತ್ಯ ಮಾರ್ಗದರ್ಶನ ಮತ್ತು ಮಾಹಿತಿ ನೀಡಲು ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗುತ್ತಿದೆ ಎಂದರು.


ಹಿಂದೆ ಪ್ರವಾಸೋದ್ಯಮ ಸಚಿವನಾಗಿದ್ದಾಗ ಪ್ರದೇಶದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೈದ್ರಾಬಾದ ಕರ್ನಾಟಕ ಪ್ರವಾಸಿ ಸಲಹಾ ಸಮಿತಿ ರಚಿಸಲಾಗಿತ್ತು. ಬೆಂಗಳೂರು ಸುತ್ತಮುತ್ತ, ದಕ್ಷಿಣ ಕರ್ನಾಟಕ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅನೇಕ ಟ್ರೆಕ್ಕಿಂಗ್ ಸ್ಪಾಟ್‌ಗಳಿವೆ. ನಮ್ಮ ಭಾಗದಲ್ಲಿ ಅದು ತೀರಾ ಕಡಿಮೆ. ಇದೀಗ ಟ್ರೆಕ್ಕಿಂಗ್ ಮೂಲಕ ಚಿಂಚೋಳಿ ವನ್ಯಜೀವಿ ಧಾಮ ನಾಡಿನ ನೆಚ್ಚಿನ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳಲಿದೆ ಎಂದರು.


*ಪ್ರವಾಸಿ ತಾಣಗಳ ಅಭಿವೃದ್ಧಿಗೆ 52 ಕೋಟಿ ರೂ.:*


ಜಿಲ್ಲೆಯ ಸನ್ನತ್ತಿ, ನಾಗಾವಿ, ಚಿಂಚೋಳಿ, ದೇವಲ ಗಾಣಗಾಪೂರ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೆ ಪ್ರವಾಸೋದ್ಯಮ ಇಲಾಖೆ, ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯಗಳ ಇಲಾಖೆ ಜೊತೆ ಚರ್ಚಿಸಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿ.ಪಿ.ಆರ್. ಸಿದ್ದಗೊಳ್ಳುತಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಈ ಪ್ರದೇಶದಲ್ಲಿ ಸುಮಾರು 52 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಹೆಚ್ಚಿಸುವ ಕೆಲಸಗಳು ಆರಂಭವಾಗಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.


ಇದಕ್ಕು ಮುನ್ನ ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ ಮಾತನಾಡಿ ಚಿಂಚೋಳಿ ವನ್ಯಜೀವಿ ಅಭಯಾರಣ್ಯ ದಕ್ಷಿಣ ಭಾರತದಲ್ಲಿಯೆ ಶುಷ್ಕ ಎಲೆಯುದುರುವ ಕಾಡಿನಲ್ಲಿ ಪ್ರಥಮ ಸ್ಥಾನದಲ್ಲಿದೆ. 13,488 ಹೆಕ್ಟೇರ್ ವಿಶಾಲ ಅರಣ್ಯ ಪ್ರದೇಶ ಇದು ಒಳಗೊಂಡಿದೆ. ಇಲ್ಲಿ ಅನೇಕ ಪ್ರಾಣಿ, ಪಕ್ಷಿ ಸಂಕುಲ ಹಾಗೂ ಸಸ್ಯ ಬೇಧಗಳನ್ನು ನೋಡಬಹುದಾಗಿದೆ. ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಬುಕ್ಕಿಂಗ್ ಮೂಲಕ ಚಾರಣ ಮಾಡುವ ಅವಕಾಶ ಮಾಡಿಕೊಡಲಾಗುವುದು ಎಂದರು.



ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಇದ್ದರು.

Post a Comment

Whatsapp Button works on Mobile Device only