ಪತ್ರಿಕೋದ್ಯಮದ ಮಹತ್ವ ಎತ್ತಿ ಹಿಡಿದ ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿ ಕಾರ್ಯಕ್ರಮ
ಕಲಬುರಗಿಯಲ್ಲಿ ಪತ್ರಿಕಾ ದಿನಾಚರಣೆ, ಯುವ ಪತ್ರಕರ್ತರಿಗೆ ಪ್ರೇರಣೆ ನೀಡಿದ ವೇದಿಕೆ
ಕಲಬುರಗಿ | 06 ಜುಲೈ 2025:
ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿ ಕಚೇರಿ, ಪಗಡೆ ಮೀಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿ ಹಾಗೂ ನೂತನವಾಗಿ ಆರಂಭಗೊಂಡ "ಕಲ್ಯಾಣ ಜ್ಯೋತಿ" ದಿನಪತ್ರಿಕೆಯ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವರದಿಗಾರರ ಸಭೆಯ ಕಾರ್ಯಕ್ರಮ ಭಾನುವಾರ ಜರುಗಿತು.
ಸಂಸ್ಥೆಯ ಅಧ್ಯಕ್ಷರಾದ ಮಹಾದೇವ ಎಸ್. ಪಗಡೆ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಗುಲ್ಬರ್ಗ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ. ತೀರ್ಥಕುಮಾರ್ ಬೆಳಕೊಟ್, ಬಿ ಅಲರ್ಟ್ ವಾಹಿನಿಯ ಸಂಪಾದಕರಾದ ಶಂಕರ್ ರೆಡ್ಡಿ, ಹೋರಾಟಗಾರರು ಮತ್ತು ಯುವ ಚಿಂತಕರಾದ ರಾಜಶೇಖರ್ ಹಿರೇಮಠ, ಸುದ್ದಿ ವಾಹಿನಿಯ ನಿರ್ದೇಶಕರಾದ ಶ್ರೀಶೈಲ ಪಗಡೆ ಹಾಗೂ ಹೋರಾಟಗಾರ ಮಲ್ಲಿಕಾರ್ಜುನ ಪರ್ತಾಬಾದ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಪರಿಸರ ಸ್ನೇಹಿಯಾಗಿ ಆರಂಭಿಸಲಾಗಿದ್ದು, ಅತಿಥಿಗಳು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆಗೈದರು. ನಂತರ, ಸುದ್ದಿವಾಹಿನಿಯಲ್ಲಿ ಶ್ರೇಷ್ಠ ಸೇವೆಗೈದ ವರದಿಗಾರರನ್ನು ಹಾಗೂ "ಕಲ್ಯಾಣ ಜ್ಯೋತಿ" ದಿನಪತ್ರಿಕೆಗೆ ಉಪಸಂಪಾದಕರಾಗಿ ಆಯ್ಕೆಯಾದ ರಾಜಶೇಖರ್ ಎಸ್. ಮಾತೋಳಿ ಹಾಗೂ ಪವನ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಪತ್ರಿಕೋದ್ಯಮದ ಪರಿಷ್ಕೃತ ರೂಪಕ್ಕೆ ಚರ್ಚೆಯ ವೇದಿಕೆ
ಡಾ. ತೀರ್ಥಕುಮಾರ್ ಬೆಳಕೊಟ್ ಅವರು ಭಾಷಣದಲ್ಲಿ ಪತ್ರಿಕೋದ್ಯಮದ ಇತಿಹಾಸ, ಇಂದಿನ ಮಾಧ್ಯಮ ಪರಿಸ್ಥಿತಿ ಮತ್ತು ಪತ್ರಕರ್ತರ changing role ಕುರಿತು ಬೆಳಕು ಚೆಲ್ಲಿದರು. “ಪತ್ರಿಕೋದ್ಯಮದ ಶಕ್ತಿ ಜನಸಾಮಾನ್ಯರ ಧ್ವನಿ. ಪತ್ರಕರ್ತರು ಬರೆದ ಸುದ್ದಿ ಮೂರನೇ-ನಾಲ್ಕನೇ ತರಗತಿ ವಿದ್ಯಾರ್ಥಿಗೂ ಅರ್ಥವಾಗುವ ರೀತಿ ಬರೆಯಬೇಕು” ಎಂಬ ಸಲಹೆ ಅವರು ನೀಡಿದರು.
ಪತ್ರಕರ್ತನ ಪಾತ್ರ ಮತ್ತು ಹೋರಾಟ – ಸ್ಪಷ್ಟ ಸಂದೇಶ
ಸಂಪಾದಕ ಶಂಕರ್ ರೆಡ್ಡಿ ಪತ್ರಕರ್ತರು ಎದುರಿಸುವ ಸವಾಲುಗಳು ಹಾಗೂ ಅವರ ಜವಾಬ್ದಾರಿಗಳ ಬಗ್ಗೆ ಮನದಟ್ಟಾಗುವಂತೆ ಮಾತನಾಡಿದರು.
ರಾಜಶೇಖರ್ ಹಿರೇಮಠ ಅವರು "ಪತ್ರಕರ್ತನ ಪೆನ್ ಎಂದರೆ ಖಡ್ಗವಷ್ಟೆ" ಎಂದು ಹೇಳಿ, ಪತ್ರಕರ್ತನ ಬುದ್ಧಿವಂತಿಕೆಯಿಂದ ಸಮಗ್ರ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಿದೆ ಎಂದು ನಂಬಿಕೆ ವ್ಯಕ್ತಪಡಿಸಿದರು.
ಹೋರಾಟಗಾರ ಮಲ್ಲಿಕಾರ್ಜುನ ಪರ್ತಾಬಾದ ಅವರು ಪತ್ರಕರ್ತನನ್ನು ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಿ, ಸಮಾಜದಲ್ಲಿ ಅವರ ಪಾತ್ರವನ್ನು ವಿಸ್ತೃತವಾಗಿ ವಿವರಿಸಿದರು.
ಪತ್ರಕರ್ತರ ಸಮಸ್ಯೆಗಳತ್ತ ಸತ್ಯದ ದೀಪ
ಅಫಜಲಪುರ ತಾಲೂಕಿನ ವರದಿಗಾರ ಯಲ್ಲಪ್ಪ ಪೂಜಾರಿ ಅವರು ಪತ್ರಕರ್ತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಹಾಗೂ ಸುಳ್ಳು ಕೇಸುಗಳ ಬಗ್ಗೆ ಅಸಹನೀಯ ಸ್ಥಿತಿಯನ್ನು ಉಲ್ಲೇಖಿಸಿದರು. ಆದರೆ “ಪತ್ರಕರ್ತರು ಹೆದರುವುದಿಲ್ಲ, ಏಕೆಂದರೆ ಅವರ ಕೆಲಸವೇ ನೈತಿಕ ಶಕ್ತಿ” ಎಂದು ಸ್ಪಷ್ಟನೆ ನೀಡಿದರು.
ಒಗ್ಗಟ್ಟು – ಪತ್ರಕರ್ತರ ಬಲ
ಕಾರ್ಯಕ್ರಮದ ಕೊನೆಗೆ ಸಂಸ್ಥೆಯ ಅಧ್ಯಕ್ಷ ಮಹಾದೇವ್ ಎಸ್. ಪಗಡೆ ಮಾತನಾಡಿ, “ಒಗ್ಗಟ್ಟಿನಲ್ಲಿ ಶಕ್ತಿ ಇದೆ. ಪತ್ರಕರ್ತರು ಯಾವುದೇ ಬೆದರಿಕೆಗೂ ಹೆದರದೇ ನಿಷ್ಠೆಯಿಂದ ಕೆಲಸ ಮಾಡಬೇಕು” ಎಂಬ ಧೈರ್ಯದ ಸಂದೇಶ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ದತ್ತಾತ್ರೆ ಬಿರಾದಾರ್ ಸುಂದರವಾಗಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ‘ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿ’ ಹಾಗೂ ‘ಕಲ್ಯಾಣ ಜ್ಯೋತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕ ಮಲ್ಲಿಕಾರ್ಜುನ ಪಗಡೆ ಮತ್ತು ವಿವಿಧ ತಾಲೂಕು ಹಾಗೂ ಜಿಲ್ಲಾ ವರದಿಗಾರರು ಉಪಸ್ಥಿತರಿದ್ದರು.
Post a Comment