*ಬೇಸಿಗೆ ಕುಡಿಯುವ ನೀರು ಪರಾಮರ್ಶೆ ಸಭೆ:*
*ಬೇಸಿಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ*
*-ಪ್ರಿಯಾಂಕ್ ಖರ್ಗೆ*
ಕಲಬುರಗಿ,ಫೆ.24( ಕರ್ನಾಟಕ ವಾರ್ತೆ) ಪ್ರತಿ ವರ್ಷ ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ನಗರ-ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಂಡುಬರುವ ಸಂಭಾವ್ಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲು ಚಿಂತನೆ ನಡೆಸಲಾಗುತ್ತಿದ್ದು, ಕೂಡಲೆ ತಾಲೂಕಾವಾರು ಸಭೆ ನಡೆಸಿ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಂಬರುವ ಬೇಸಿಗೆಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಪೂರೈಕೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹಿಂದಿನ 5 ವರ್ಷಗಳ ಸಮಸ್ಯಾತ್ಮಕ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿ ಸಲ್ಲಿಸಿದಲ್ಲಿ ಕಂದಾಯ, ಕೃಷಿ ರೇಷ್ಮೆ, ತೋಟಗಾರಿಕೆ, ಪಶುಸಂಗೋಪನಾ ಸಚಿವರೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸುವುದರ ಜೊತೆಗೆ ಇದಕ್ಕೆ ಬೇಕಾದ ಹಣ ಸಹ ಹೊಂದಿಸಲಾಗುವುದು ಎಂದರು.
ಪ್ರತಿ ಬೇಸಿಗೆಯಲ್ಲಿ ಹೊಸದಾಗಿ ಬೋರವೆಲ್ ಕೊರೆಯುವುದು ಬೇಡ. ಬದಲು ಇರುವ ಬೋರವೆಲ್ ಗಳಿಗೆ ಫ್ಲಶ್ಸಿಂಗ್ ಮಾಡಬೇಕು, ಮೋಟಾರದ ಕೆಟ್ಟಿದರೆ ಅದನ್ನು ಬದಲಾಯಿಸಬೇಕು. ಯುದ್ದ ಆರಂಭವಾದಾಗ ಶಸ್ತ್ರಾಭ್ಯಾಸ ಬೇಡ. ಈಗಿನಿಂದಲೆ ಸಮಸ್ಯಾತ್ಮಕ ಹಳ್ಳಿ, ನಗರ ಪಟ್ಟಣಗಳಲ್ಲಿ ಕುಡಿಯುವ ನೀರು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಹವಾಮಾನ ಇಲಾಖೆ ಪ್ರಕಾರ ಈ ಬಾರಿ ಹೆಚ್ಚಿನ ಬಿಸಿಲಿನ ಜೊತೆಗೆ ಬಿಸಿ ಗಾಳಿ ಇದೆ. ಹೀಗಾಗಿ ಎಲ್ಲಾ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರ ಅರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಬಳಿ ಪಿ.ಡಿ.ಖಾತೆಯಲ್ಲಿ ಹಣ ಇದ್ದು, ಅದನ್ನು ಸಮರ್ಪಕವಾಗಿ ಬಳಸಿ ಎಂದು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.
ಕಳದ ವರ್ಷ ನೀರು ಪೂರೈಕೆ ಮಾಡಿದ ಖಾಸಗಿ ಬೋರವೆಲ್, ಟ್ಯಾಂಕರ್ ಗಳಿಗೆ ಬಾಕಿ ಉಳಿದಿದೆ ಎಂಬ ಮಾಹಿತಿ ಇದ್ದು, ಕೂಡಲೆ ಸದರಿ ಬಿಲ್ಲು ಕ್ಲಿಯರ್ ಮಾಡಬೇಕು ಎಂದು ಡಿ.ಸಿ, ಸಿ.ಇ.ಓ ಗೆ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಕಲಬುರಗಿ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಪಾಲಿಕೆ ಆಯುಕ್ತ ಶಿಂಧೇ ಅವಿನಾಶ ಸಜ್ಜನ್ ಅವರು ಮಾತನಾಡಿ, 15ನೇ ಹಣಕಾಸು ಯೋಜನೆಯಡಿ ಬೋರವೆಲ್ ಕೊರೆಯಲು ದಕ್ಷಿಣ ಕ್ಷೇತ್ರಕ್ಕೆ 96 ಲಕ್ಷ ರೂ., ಉತ್ತರ ಕ್ಷೇತ್ರಕ್ಕೆ 79 ಲಕ್ಷ ರೂ., ನಗರಕ್ಕೆ 1 ಕೋಟಿ ರೂ. ಸೇರಿ ಒಟ್ಟಾರೆ 2.75 ಕೋಟಿ ರೂ. ಮೀಸಲಿರಿಸಿದೆ. ಪ್ರತಿ ವಾರ್ಡ್ ಗೆ ಒಂದು ಟ್ಯಾಂಕರ್ ಮೀಸಲಿರುವಂತೆ ಎಲ್ & ಟಿ ಕಂಪನಿಗೆ ಸೂಚಿಸಿದೆ ಎಂದರು. ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಕೂಡಲೆ ಸಭೆ ಕರೆದು ಸಮನ್ವಯ ಸಾಧಿಸಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ ಸಾವಳಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ಪರಿಹಾರ ಕಲ್ಪಿಸಬೇಕು. ನಗರದಲ್ಲಿ ಕೊಳವೆ ಬಾವಿಗೆ 300 ಮೋಟಾರ್ ಅವಶ್ಯಕತೆ ಇದೆ ಎಂದು ಸಭೆಯ ಗಮನಕ್ಕೆ ತಂದರು.
*ಮಾರ್ಚ್ 1 ರಿಂದ 15 ದಿನಕ್ಕೊಮ್ಮೆ ಪರಾಮರ್ಶಿಸಬೇಕು:*
ಮಾರ್ಚ್ 1 ರಿಂದ ಮುಂದಿನ ಮೂರು ತಿಂಗಳ ಕಾಲ ಪ್ರತಿ 15 ದಿನಕ್ಕೊಮ್ಮೆ ತಹಶೀಲ್ದಾರರು ಮತ್ತು ತಾಲೂಕಾ ಪಂಚಾಯತ್ ಇ.ಓ ಗಳು ತಾಲೂಕು ಮಟ್ಟದಲ್ಲಿ ಕುಡಿಯುವ ನೀರು ಸಂಬಂಧ ಸಭೆ ನಡೆಸಿ ಪರಾಮರ್ಶಿಸಬೇಕು. ಟಾಸ್ಟ್ ಫೋರ್ಸ್ ಸಭೆ ಕರೆದು ಸಭೆ ನಡಾವಳಿ ಸಿದ್ದಪಡಿಸಿ ಅದರಂತೆ ಅನುದಾನ ಖರ್ಚು ಮಾಡಬೇಕು. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲದೋರದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
*ಟಾಸ್ಕ್ ಫೋರ್ಸ್ ಕಮಿಟಿ ಸಭೆ ಕರೆಯಿರಿ:*
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಕೂಡಲೆ ಶಾಸಕರ ಅದ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಸಭೆ ಕರೆದು ಶಾಸಕರ ಅಭಿಪ್ರಾಯ ಪಡೆದು ಕ್ರಿಯಾ ಯೋಜನೆ ರೂಪಿಸಬೇಕು ಎಂದು ನಿರ್ದೇಶನ ನೀಡಿದರು
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ ಜಿಲ್ಲೆಯಾದ್ಯಂತ 194 ಪ್ರದೇಶಗಳನ್ನು ಸಮ್ಯಸ್ಯಾತ್ಮಕ ಪಟ್ಟಿ ಗುರುತಿಸಿ ಇಲ್ಲಿ ಸರ್ಕಾರಿ, ಖಾಸಗಿ, ಕೊಳವೆ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ನೀಲಿ ನಕ್ಷೆ ಸಿದ್ಧಪಡಿಸಿದೆ ಎಂದು ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಿನ ತಹಶೀಲ್ದಾರರು, ತಾಲೂಕ ಪಂಚಾಯತ್ ಇ.ಓ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇದ್ದರು.
Post a Comment